November 19, 2007

ಅವರಿರುವುದೇ ಹೀಗೆ

ಊರಿನಲ್ಲಿದ್ದಾಗ ನಡೆಯುತ್ತಿದ್ದ ಕೆಲ ಘಟನೆಗಳನ್ನು ನೆನಪಿಸಿಕೊಳ್ಳುವುದೇ ಒಂದು ಮಜ.
ನಮ್ಮೂರಿನ ಜನರು….. ಅವರೆಲ್ಲಾ ನಿಜವಾಗಿ ಮುಗ್ಧರು.
ತಾವೇನು ಮಾತನಾಡುತ್ತಿದ್ದೇವೆ ಎಂಬ ಅರಿವಿಲ್ಲದೆಯೇ ಮಾತನಾಡುತ್ತಿರುತ್ತಾರೆ.
ಅವುಗಳಲ್ಲಿ ಕೆಲವನ್ನು ನಿಮ್ಮೆದುರಿಗೆ ಇಡುತ್ತಿದ್ದೇನೆ ಓದಿ...

ಗಣಪ ಹಸ್ಲರ್ ಸುಮಾರು 80 ವರ್ಷಗಳ, ಬೆನ್ನು ಬಾಗಿ ಹೋಗಿರುವ ಮುದುಕ. ಆತ ತನ್ನಮಗಳು ಪಾರ್ವತಿಯನ್ನು register ಮದುವೆ ಮಾಡಿಸಬೇಕೆಂದು ಮನಸ್ಸುಮಾಡಿ ಯಾರ ಹತ್ತಿರವೋ marriage registration form ಕೂಡ ತರಿಸಿಕೊಂಡಿದ್ದ.
ಅದನ್ನು ತುಂಬಿಸಿಕೊಳ್ಳಲು ಬಂದಿದ್ದ. ಅದರಲ್ಲಿ ಹುಡುಗಿಯ ವಯಸ್ಸು ಎಂಬುದನ್ನು ತುಂಬುವಾಗ ಅಮ್ಮ ಕೇಳಿದರು, 'ಗಣಪ, ಪಾರ್ವತಿಗೆ ಎಷ್ಟು ವರ್ಷ ಆಯ್ತಾ’ . ಆಗ ಆತ ಹೇಳಿದ, ‘ಅದ್ಕೇ... ಒಂದ್ ಹತ್ತ್ ವರ್ಸ.'
ಅಮ್ಮ ಗಲಿಬಿಲಿಯಾಗಿ ಕೇಳಿದರು, 'ಹಂಗಾರೆ ನಿಂಗೆ ಎಷ್ಟು ವರ್ಷವಾ?' ಅದಕ್ಕವನು ಹೇಳಿದ್ದು, 'ನಂಗೇ… ಒಂದಿಪ್ಪತ್ ವರ್ಸ'!
ಅಮ್ಮನ ಬಾಯಿ ಸುಮಾರು ನಾಲ್ಕೈದು ಸೆಕೆಂಡುಗಳಷ್ಟು ಕಾಲ ತೆರೆದೇ ಇತ್ತು!

ವಿಟ್ಠಲ ಪೂಜಾರಿ- ಕುಂದಾಪುರದಿಂದ ಬಂದು ನಮ್ಮ ಊರಿನಲ್ಲಿ ಒಂದಷ್ಟು ವರ್ಷಗಳ ಕಾಲ ನೆಲಸಿದ್ದವ. ನಂತರ ಅವನು ತನ್ನ ಊರಿಗೇ ತಿರುಗಿ ಹೋಗಿಬಿಟ್ಟಿದ್ದ. ಇತ್ತೀಚೆಗೆ ತೀರಿಹೋದ ಎಂದೂ ಕೂಡ ತಿಳಿಯಿತು.ಅವನಿಗೆ ವಿಪರೀತ ಕುಡಿಯುವ ಚಟ. ಅಂಗಿಯ ಎರಡು ಗುಂಡಿಗಳು ಯಾವಾಗಲೂ ತೆರೆದುಕೊಂಡೇ ಇರುತ್ತಿದ್ದವು.ಅವನು ಒಮ್ಮೆ ಯಾರದೋ ಬಗ್ಗೆ ದೂರನ್ನು ಹೇಳಲು ಅಪ್ಪನಲ್ಲಿಗೆ ಬಂದಿದ್ದ, ಮತ್ತು ಹೇಳುತ್ತಿದ್ದ,'ಆ ಮನ್ ಷಾ ಉಪ್ಯೋಗಿಲ್ಲ ಹೆಗಡೆರೇ. ನಾ ನಿಮ್ ಹತ್ರೆ ಹೇಳೂದ್ ಎಂತದೂ ಅಂದ್ರೆ… ಅವ ಬಿಸ್ಲ್ ಕೊಪ್ಪದ ಕತ್ರಿಲೆಲ್ಲಾ ಅಂಗಿ ಗುಬ್ಬಿ (ಗುಂಡಿ) ತೆಗ್ದು ಬಚ್ಚಿಕಂಡು ತಿರಗ್ತಾ.'
ಅಪ್ಪ ತಕ್ಷಣ ಕೇಳಿದ್ದರು,'ಮತ್ತೆ ನೀ ಮಾಡದು ಯಂತದಾ?' ಅವ ಅದಕ್ಕೆ ಸಮರ್ಥನೆಯನ್ನೂ ಕೊಟ್ಟಿದ್ದ,'ನಾನಾರೆ ಎರಡೇ ಗುಬ್ಬಿ ತೆಕ್ಕತ್ತೆ, ಅವ ಅಷ್ಟೂ ಗುಬ್ಬಿ ತೆಕ್ಕತ್ನಲೆ.' ಎಂದು!

ಶಂಕರ ಹಸ್ಲರ ಒಮ್ಮೆ ಯಾವುದೋ ಕಾರಣಕ್ಕೆ ನಮ್ಮ ಮನೆಗೆ ಬಂದಿದ್ದ. ಅವನನ್ನು ಎಲ್ಲರೂ ಕರೆಯುವುದು ಗಿಡ್ಡ ಶಂಕರ ಎಂದು, ಏಕೆಂದರೆ ಅವನು ಸ್ವಲ್ಪ ಕುಳ್ಳಗಿದ್ದಾನೆ. ಆಗಿನ್ನೂ ಕೇಬಲ್ ಟಿವಿ ಗಳೆಲ್ಲಾ ಇರದಿದ್ದ ಕಾಲ. ನಾವೆಲ್ಲ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಏನೋ ಒಂದು ಕಾರ್ಯಕ್ರಮ ನೋಡುತ್ತಿದ್ದೆವು. ಏನು ಎಂಬುದು ಸರಿಯಾಗಿ ನೆನಪಿಲ್ಲ. ಅಂತೂ ಬೇರೆ ಬೇರೆ ರೀತಿಯ ಪ್ರಾಣಿಗಳನ್ನೆಲ್ಲಾ ತೋರಿಸುತ್ತಿದ್ದರು. ಗಿಡ್ಡ ಶಂಕರನೂ ಕುಳಿತು ಪೂರ್ತಿ ಕಾರ್ಯಕ್ರಮ ಮುಗಿಯುವವರೆಗೂ ಕುಳಿತು ನೋಡಿದ.
ನಂತರ ಹೊರಡುವಾಗ ಹೇಳುತ್ತಾ ಹೋದ, 'ಪರ್ ಪಂಚಾದಾಗೇ (ಪ್ರಪಂಚದಲ್ಲಿ) ಯಾವ್ ಯಾವ್ ನಮ್ನೀ ಪಕ್ಸಿ (ಪಕ್ಷಿ) ಎಲ್ಲಾ ಐದಾವೋ ಏನೋ' ಎಂದು. ಅದರಲ್ಲೇನು ಮಜ ಅಂತೀರಾ? ಆ ಕಾರ್ಯಕ್ರಮದಲ್ಲಿ ಪ್ರಾಣಿಗಳ ಹೊರತಾಗಿ ಒಂದೇ ಒಂದು ಪಕ್ಷಿಯನ್ನೂ ತೋರಿಸಿರಲಿಲ್ಲ!

ಶಂಕರ ಗೌಡ, ಮಲಕ್ಯಾ ಗೌಡ ಅಣ್ಣ-ತಮ್ಮಂದಿರು.
ಯಾವಾಗ ನೋಡಿದರೂ ಇಬ್ಬರ ಜಗಳ ಇದ್ದದ್ದೇ. ಒಮ್ಮೆ ಇಬ್ಬರೂ ಜಗಳವಾಡಿಕೊಂಡು ಅಪ್ಪನ ಹತ್ತಿರ ದೂರು ತಂದಿದ್ದರು.
ಮಾತಿಗೆ ಮಾತು ಬೆಳೆದು ಅಲ್ಲಿಯೇ ಪುನಃ ಜಗಳಕ್ಕಿಳಿದರು.
ಮಲಕ್ಯಾನಿಗೆ ಸಿಟ್ಟು ನೆತ್ತಿಗೇರಿ ಕೂಗಿದ, '@#$!^ ಮಗನೇ, ನಿನ್ನ ಕಾಲ್ದಾಗೇ ಮನೆ ಹಾಳಾಗಿದ್ದು.'
ಶಂಕರನಿಗೆ ತಡೆಯಲಾಗಲಿಲ್ಲ. ಕೇಳಿಯೇ ಬಿಟ್ಟ,'ಹೆಗಡೆರ ಮನೆ ಅಂಗಳದಾಗೇ
@#$!@ ಮಗನೆ ಅಂತೀಯಾ &%#$@ ಮಗನೆ'.
ಅಪ್ಪ ಕೇಳಿದ್ದರು, 'ಮತ್ತೆ ಈಗ ನೀ ಹೇಳ್ತಾ ಇರದು ಯಂತದಾ ಶಂಕ್ರಾ?'
ಶಂಕರ ಗೌಡ ಮುಸಿ ಮುಸಿ ನಗುತ್ತಾ ತಲೆ ಕೆರೆದುಕೊಂಡ ಚಿತ್ರ ಇನ್ನೂ ಕಣ್ಣೆದುರಿಗಿದೆ.

No comments: