December 7, 2007

ನಾವೇ ಸಾಯಬೇಕು … (ಉತ್ತರ ಕನ್ನಡದ ಗಾದೆ – 95, 96 ಮತ್ತು 97)

ನಾವೇ ಸಾಯಬೇಕು ಸ್ವರ್ಗ ಕಾಣಬೇಕು.

ಬೇರೆಯವರು ಸತ್ತರೆ ನಮಗೆ ಸ್ವರ್ಗ ಸಿಗುವುದಿಲ್ಲ. ನಾವು ಸತ್ತರೆ ಮಾತ್ರ ಸ್ವರ್ಗವನ್ನು ಕಾಣಲು ಸಾಧ್ಯ.

ಬೇರೆಯವರನ್ನು ನಂಬಿ ಕುಳಿತರೆ ನಮ್ಮ ಕೆಲಸ ಆಗುವುದಿಲ್ಲ. ಅದನ್ನು ನಾವೇ ಮಾಡಿಕೊಳ್ಳಬೇಕು ಎಂಬುದು ಇದರ ಅರ್ಥ.

ಹೆಚ್ಚು ಕಡಿಮೆ ಇದೇ ಅರ್ಥದಲ್ಲಿ ಬಳಸಲ್ಪಡುವ ಇನ್ನೆರಡು ಮಾತುಗಳೆಂದರೆ, ನಮ್ಮ ತಲೆಗೆ ನಮ್ಮ ಕೈ. ನಮಗೆ ಸಮಸ್ಯೆಗಳು ಬಂದಾಗ ನಮ್ಮ ತಲೆಯ ಮೇಲೆ ನಾವೇ ಕೈ ಹೊತ್ತುಕೊಳ್ಳಬೇಕೇ ವಿನಃ ಬೇರೆಯವರು ನಮ್ಮ ತಲೆಯ ಮೇಲೆ ಕೈ ಹೊರಿಸುವುದಿಲ್ಲ. ಅಂದರೆ ನಮ್ಮ ಸಮಸ್ಯೆಯನ್ನು ನಾವೇ ಬಗೆ ಹರಿಸಿಕೊಳ್ಳಬೇಕು.

ನಮಗೆ ನಾವು, ಗೋಡೆಗೆ ಮಣ್ಣು. ಮಣ್ಣಿನಿಂದಾದ ಗೋಡೆ ಹೇಗೆ ತನ್ನಷ್ಟಕ್ಕೇ ತಾನು ಭದ್ರವಾಗಿ ನಿಂತಿರುತ್ತದೆಯೋ ಹಾಗೆಯೇ ನಮ್ಮಷ್ಟ್ಟಕ್ಕೇ ನಾವು ಭದ್ರವಾಗಿ ನಿಲ್ಲಬೇಕು, ಇತರರು ಸಹಾಯ ಮಾಡಲಾರರು ಎಂದು ಅರ್ಥ.

No comments: